ಫ್ಲ್ಯಾಮ್‍ಸ್ಟೀಡ್, ಜಾನ್ 1646_1719. ಇಂಗ್ಲೆಂಡಿನ ಖಗೋಳ ವಿಜ್ಞಾನಿ. ಜನನ 19-8-1646, ಮರಣ 31-12-1719. ತಂದೆ ಸ್ಟೀಫನ್ ಫ್ಲ್ಯಾಮ್‍ಸ್ಟೀಡ್, ತಾಯಿ ಮೇರಿ ಸ್ಟೇಟ್‍ಮನ್. ಚಿಕ್ಕಂದಿನಲ್ಲೇ ತಾಯಿ ಮಲತಾಯಿಯರನ್ನು ಕಳೆದುಕೊಂಡ ಫ್ಲ್ಯಾಮ್‍ಸ್ಟೀಡ್ ಡರ್ಬಿಯಲ್ಲಿಯ ಉಚಿತಶಾಲೆ ಸೇರಬೇಕಾಯಿತು. ಉನ್ನತ ಶಿಕ್ಷಣಕ್ಕಾಗಿ ಪೂರ್ವಭಾವೀಶಿಕ್ಷಣ ಪಡೆದನಾದರೂ ತೀವ್ರ ಅನಾರೋಗ್ಯದ ಪರಿಣಾಮವಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಪದೇ ಪದೇ ಕಾಯಿಲೆ ಬೀಳುತ್ತಿದ್ದುದರಿಂದ ವಿಶ್ವವಿದ್ಯಾಲಯ ಅಧ್ಯಯನಕ್ಕೆ ಅವಕಾಶ ಒದಗಲಿಲ್ಲ.

	ಹಾಸಿಗೆ ಹಿಡಿದು ಮಲಗಿದ್ದ ವೇಳೆ ಖಗೋಳವಿಜ್ಞಾನಿಗಳೊಡನೆ ವ್ಯವಹರಿಸಿದ. ಖಗೋಳವಿಜ್ಞಾನ ಬಹಳ ಆಸಕ್ತಿಯಿಂದ ಓದಿದ. 1662 ಸೆಪ್ಟೆಂಬರ್ 12ರಂದು ಸಂಭವಿಸಿದ ಸೂರ್ಯಗ್ರಹಣವನ್ನು ವೀಕ್ಷಿಸಿ ಇದರ ಬಗ್ಗೆ ಖ್ಯಾತ ಖಗೋಳ ವಿಜ್ಞಾನಿಗಳೊಡನೆ ವ್ಯವಹರಿಸಿದ.  ಖಗೋಳವಿಜ್ಞಾನ ವಿಷಯಗಳನ್ನು ಕುರಿತ ಇವನ ಕೆಲವು ಪ್ರಕಟಣೆಗಳಿಂದ (1670) ಇತರ ಖಗೋಳ ವಿಜ್ಞಾನಿಗಳ ಗಮನ ಇವನತ್ತ ಹರಿಯಿತು. ಅದೇ ವರ್ಷ ಈತನಿಗೆ ನ್ಯೂಟನ್ನನ ಪರಿಚಯವಾಯಿತು.

	ಅಂದಿನ ದಿವಸಗಳಲ್ಲಿ ಸಮುದ್ರಯಾನ ತಂತ್ರಗಳನ್ನು ಉತ್ತಮ ಪಡಿಸುವುದರ ಬಗ್ಗೆ ಇಂಗ್ಲೆಂಡಿನಲ್ಲಿ ಅಪಾರ ಆಸಕ್ತಿ ಇತ್ತು. ಜೊತೆಗೆ ವ್ಯಾಪಾರಿನೌಕಾಬಲವೂ ಹೆಚ್ಚಾಗಿದ್ದುದರಿಂದ ಈ ಕೆಲಸಕ್ಕೆ ಮತ್ತಷ್ಟು ಪುಷ್ಟಿ ದೊರೆಯಿತು. ಸಮುದ್ರಯಾನದ ವೇಳೆ ಯಾವುದೇ ಸ್ಥಳದ ನಿರ್ದಿಷ್ಟ ರೇಖಾಂಶ ನಿರ್ಧರಿಸಲು ಯಾವ ಯೋಜನೆಗಾದರೂ ಬ್ರಿಟಿಷ್ ಸರ್ಕಾರದ ಬೆಂಬಲ ಇದ್ದ ಕಾರಣ, ಕಾರ್ಯರೂಪಕ್ಕೆ ಬಂದ ಒಂದು ಯೋಜನೆಯಲ್ಲಿ ಫ್ಲ್ಯಾಮ್‍ಸ್ಟೀಡನಿಗೂ ಅವಕಾಶ ದೊರಕಿತು. ಆದರೆ ಈ ಅವಕಾಶವನ್ನು ಈತ ತಿರಸ್ಕರಿಸಿದ. ಆ ತನಕ ತಿಳಿದಿದ್ದ ನಕ್ಷತ್ರಗಳ ಸ್ಥಾನಪಟವನ್ನು ಉತ್ತಮ ಪಡಿಸಿದ ಹೊರತು ರೇಖಾಂಶ ನಿರ್ಧರಣೆಗೆ ಮತ್ತಾವುದೇ ವಿಧಾನವೂ ಪ್ರಯೋಜನವಾಗಲಾರದೆಂದು ಈತ ಭಾವಿಸಿದ್ದ. ನಕ್ಷತ್ರಸ್ಥಾನಗಳ ಪಟವನ್ನು ಉತ್ತಮಪಡಿಸುವ ಕೆಲಸಕ್ಕೆ ರಾಷ್ಟ್ರೀಯ ಮಟ್ಟದ ವೀಕ್ಷಣಾಲಯದ ಅಗತ್ಯ ಇದೆ ಎಂದು ಈತ ಚಾಲ್ರ್ಸ್ ದೊರೆಗೆ ತಿಳಿಸಿದ. ಈ ಸಲಹೆಯನ್ನು ಅಂಗೀಕರಿಸಿದ ದೊರೆ ಗ್ರೀನಿಚ್‍ನಲ್ಲಿ ಒಂದು ವೇಧಶಾಲೆ ಸ್ಥಾಪಿಸಲು ಅನುಮತಿ ಇತ್ತ. ಅದಕ್ಕೆ ಫ್ಲ್ಯಾಮ್‍ಸ್ಟೀಡ್‍ನನ್ನೇ ಮುಖ್ಯಾಧಿಕಾರಿಯಾಗಿ ನೇಮಿಸಲಾಯಿತು. ಚಂದ್ರನ ಕಲೆಗಳನ್ನೂ ಚಂದ್ರಬಿಂಬದಿಂದ ಉಂಟಾಗುವ ನಕ್ಷತ್ರ ಗ್ರಹಣಗಳನ್ನೂ ವೀಕ್ಷಿಸುತ್ತಿದ್ದ ಫ್ಲ್ಯಾಮ್‍ಸ್ಟೀಡನಿಗೆ ವೇಧಶಾಲೆಯ ಸ್ಥಾಪನೆಯಿಂದ (1675) ಬಹಳಷ್ಟು ಅನುಕೂಲವಾಯಿತು. ಆ ಹಣದಲ್ಲೇ ಅವಶ್ಯ ಉಪಕರಣಗಳನ್ನು ಸಜ್ಜುಗೊಳಿಸಿ ಕೊಂಡ. ರಾಜಖಗೋಳವೀಕ್ಷಕನಾಗಿ ನೇಮಕ ಹೊಂದುವ ಹಿಂದಿನ ವರ್ಷ (1674) ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿದ್ದ. ಈತನ ತಂದೆಯ ಮರಣದಿಂದಾಗಿ (1688) ಉಳಿದುಕೊಂಡಿದ್ದ ಅಲ್ಪಸ್ವಲ್ಪ ಪಿತ್ರಾರ್ಜಿತ ಆಸ್ತಿಯಿಂದ ಸ್ವಲ್ಪ ಹಣ ಒದಗಿಬಂದಿತು. ಮುಂದೆ ಇದು ಅವನಿಗೆ ಖಗೋಳಕಾಯಗಳ ಉನ್ನತಿಯನ್ನು (ಅಲಿಟ್ಯೂಡ್) ಅಳೆಯುವ ಉಪಕರಣದ ನಿರ್ಮಾಣಕ್ಕೆ ನೆರವಾಯಿತು.

	ಖಗೋಳವೀಕ್ಷಣಾಲಯದ ದುಡಿಮೆಗಾಗಿ ದೊರೆಯುತ್ತಿದ್ದ ಕಡಿಮೆ ವೇತನ, ಪದೇ ಪದೇ ಕಾಡುತ್ತಿದ್ದ ಅನಾರೋಗ್ಯ, ಬೇಕೆಂದಾಗಿ ಒದಗದ ಸಹಾಯ, ಯಾವುದೇ ಕೆಲಸದಲ್ಲಿ ಆದರೂ ಉತ್ಕøಷ್ಟ ಪರಿಪೂರ್ಣತೆ ಸಾಧಿಸಬೇಕೆಂಬ ವಾಂಛೆ, ಹಠಮಾರಿತನ ಇವೆಲ್ಲ ಈತನಿಗೆ ಸಮಕಾಲೀನ ಖಗೋಳವಿಜ್ಞಾನಿಗಳೊಂದಿಗೆ ಘರ್ಷಣೆ ತರಲು ಕಾರಣವಾದುವು. ನ್ಯೂಟನ್ನನಂಥ ಮೇಧಾವಿ ಸಹ ಈತ ನಡೆಸಿದ ಯಾವುದೇ ವೀಕ್ಷಣೆಗಳನ್ನೂ ವೀಕ್ಷಿತ ಫಲಿತಾಂಶಗಳನ್ನೂ ತನಗೆ ತಂದೊಪ್ಪಿಸಬೇಕು ಎಂಬ ಭಾವನೆ ಹೊಂದಿದ್ದನಂತೆ. ಈ ಮನೋಭಾವವನ್ನು ಫ್ಲ್ಯಾಮ್‍ಸ್ಟೀಡ್ ಪ್ರತಿಭಟಿಸಿದುದರಿಂದ ಇಬ್ಬರಲ್ಲೂ ವಿರೋಧ ತಲೆದೋರಿತು. ವೀಕ್ಷಿತ ಫಲಿತಾಂಶಗಳನ್ನು ಆದಷ್ಟು ಬೇಗ ಪ್ರಕಟಿಸಬೇಕೆಂದು ಮೇಲಿನಿಂದ ಒತ್ತಡ ಬಂದರೂ ಕೆಲಸ ಸಂಪೂರ್ಣವಾಗುವ ತನಕ ಯಾವುದನ್ನೂ ಪ್ರಕಟಿಸುವುದಿಲ್ಲ ಎಂದು ಹಠ ಹಿಡಿದ. ನ್ಯೂಟನ್ನನ ಸ್ನೇಹಿತನಾಗಿದ್ದ ಎಡ್ಮಂಡ್ ಹ್ಯಾಲೀ, ಫ್ಲ್ಯಾಮ್‍ಸ್ಟೀಡನ ಹಲವಾರು ವೀಕ್ಷಿತ ಫಲಿತಾಂಶಗಳನ್ನು ಕ್ರೋಡೀಕರಿಸಿ ಸಂಪಾದಿಸಿ ಪ್ರಕಟಿಸಿದ್ದಕ್ಕಾಗಿ ಆತನೊಡನೆ ವ್ಯಾಜ್ಯ ಮಾಡಿ ಸಿಕ್ಕಿದ ಪ್ರತಿಗಳನ್ನೆಲ್ಲ ಫ್ಲ್ಯಾಮ್‍ಸ್ಟೀಡ್ ಸುಟ್ಟು ಹಾಳುಮಾಡಿದ. ಸುಮಾರು 300 ಪ್ರತಿಗಳು ಹಾಳಾದುವಂತೆ. ನಕ್ಷತ್ರಸ್ಥಾನಗಳನ್ನು ಸೂಚಿಸುವ ಕೋಷ್ಟಕದ ಕೆಲಸ ಈ ದುರ್ಘಟನೆಯಿಂದಾಗಿ ಚುರುಕುಗೊಂಡು ತ್ವರಿತಗತಿಯಿಂದ ಸಾಗಿತು. ಇಷ್ಟಾದರೂ ಪೂರ್ಣ ಕೋಷ್ಟಕದ ಕೆಲವು ಭಾಗಗಳು ಪ್ರಕಟವಾದದ್ದು ಇವನ ಮರಣಾನಂತರವೇ. 3,000 ನಕ್ಷತ್ರಗಳ ಹೆಸರುಗಳನ್ನು ಹೊಂದಿದ್ದ ಈ ಕೋಷ್ಟಕ ಟೈಕೋಬ್ರಾಹೀ (1546-1601) ತಯಾರಿಸಿದ್ದ ಕೋಷ್ಟಕಕ್ಕಿಂತಲೂ ಮೂರುಪಟ್ಟು ದೊಡ್ಡದಿತ್ತು. ಅಷ್ಟು ಹೊತ್ತಿಗಾಗಲೇ ದೂರದರ್ಶಕಗಳು ಹಾಗೂ ಸೂಕ್ಷ್ಮಮಾಪಕಗಳು ಬಳಕೆಗೆ ಬಂದು ಪ್ರತಿಯೊಂದು ನಕ್ಷತ್ರವನ್ನೂ ನಿಖರವಾಗಿ ಗುರುತಿಸುವ ಕಾರ್ಯ ಸುಲಭವಾಯಿತು.

	ಭೂಮಿಯ ಸುತ್ತ ಚಂದ್ರನ ಚಲನೆಯನ್ನೂ ಚಂದ್ರನಿಂದ ನಕ್ಷತ್ರಗಳು ಮರೆಯಾಗುವ ಸನ್ನಿವೇಶವನ್ನೂ (ನಕ್ಷತ್ರಗ್ರಹಣ) ಕುರಿತಂತೆ ಫ್ಲ್ಯಾಮ್‍ಸ್ಟೀಡ್ ಬಹಳಷ್ಟು ಅಧ್ಯಯನಗಳನ್ನೂ ವೀಕ್ಷಣೆಗಳನ್ನೂ ನಡೆಸಿದ. ಚಾಂದ್ರ ಸಿದ್ಧಾಂತ ಎಂದು ಕರೆಯಲಾಗುವ ಈ ವಿಷಯ ಇವನ ಜೀವನದ ಬಲು ಮುಖ್ಯ ಕೆಲಸವಾಯಿತು. ಪ್ರಚಲಿತವಾಗಿದ್ದ ಪ್ರಾಚೀನ ಚಾಂದ್ರ ಸಿದ್ಧಾಂತವೊಂದನ್ನು (ಜೆರಿಮೈಯ ಹಾರೋಕ್ಸ್) ಮೂರುಬಾರಿ (1680, 1690 ಮತ್ತು 1703) ಪರಿಷ್ಕರಿಸಿ, ಚಾಂದ್ರಚಲನಗತಿಗಳನ್ನು ಕುರಿತ ನಿರ್ದಿಷ್ಟ ನಿರೂಪಣೆ ಕೊಟ್ಟ ಖ್ಯಾತಿ ಫ್ಲ್ಯಾಮ್‍ಸ್ಟೀಡನದು. ಇವನ ನಿರೂಪಣೆಯನ್ನು ಆಧಾರವಾಗಿರಿಸಿಕೊಂಡು ಮುಂದೆ ನ್ಯೂಟನ್ ಚಂದ್ರನಚಲನೆ ವೀಕ್ಷಿಸಿ ಚಾಂದ್ರ ಸಿದ್ಧಾಂತವನ್ನು ಮತ್ತಷ್ಟು ಉತ್ತಮಪಡಿಸಿದ. ಗ್ರಹಗಳನ್ನು ಕುರಿತಂತೆ ಫ್ಲ್ಯಾಮ್‍ಸ್ಟೀಡ್ ನಡೆಸಿದ ಮತ್ತೊಂದು ಆನುಷಂಗಿಕ ಸ್ವಾರಸ್ಯಕರ ಕೆಲಸ ಎಂದರೆ 1672ರಲ್ಲಿ ಸಂಭವಿಸಿದ ಮಂಗಳಗ್ರಹದ ಸೂರ್ಯನೀಚನಿಯುತಿಯ (ಪೆರಿಹೀಲಿಯನ್ ಅಪೊಜಿಷನ್) ವೀಕ್ಷಣೆಗಳಿಂದ ಸೌರದಿಗಂತರ ನಿರ್ಧರಣೆ. ಜೊನಾಸ್ ಮೋರ್ ಎಂಬವ ನೀಡಿದ್ದ ಷಡಂಗ (ಸೆಕ್‍ಸ್ಟೆಂಟ್) ಉಪಕರಣ ಬಳಸಿ 1676 ಮತ್ತು 1689ರ ನಡುವಿನ ಅವಧಿಯಲ್ಲಿ ಈತ ಸುಮಾರು 20,000 ವೀಕ್ಷಣೆ ಮಾಡಿದ್ದ. ಟೈಕೋಬ್ರಾಹೀ ನಡೆಸಿದ್ದ ವೀಕ್ಷಣೆಗಳಿಗಿಂತಲೂ ಇವು ಉತ್ತಮವಾಗಿದ್ದುವು. ಈತ ನಿರ್ಮಿಸಿದ (1683) ಉನ್ನತಿಮಾಪಕ (ಮ್ಯೂರಲ್ ಕ್ವಾಡ್ರೆಂಟ್) ತೀರ ಭಿದುರಲವಾಗಿದ್ದುದರಿಂದ, ಪಿತ್ರಾರ್ಜಿತ ಆಸ್ತಿಯಿಂದ ಮಾಡಿದ್ದಂಥ ಮಾಪಕವೇ (ಮ್ಯೂರಲ್ ಆರ್ಕ್) ಬಹಳಷ್ಟು ಉಪಯೋಗಕ್ಕೆ ಬಂತು. 1690ರ ದಶಕದ ವರ್ಷಗಳಲ್ಲಿ ಈತ ನಡೆಸಿದ ಮೂಲಭೂತ ಖಗೋಳವೀಕ್ಷಣೆಗಳು ಬ್ರಾಡ್ಲೀಯ ವೀಕ್ಷಣೆಗಳಿಗಿಂತಲೂ ಹೆಚ್ಚು ನಿಖರವಾಗಿದ್ದುವು. ಗ್ರೀನಿಚ್‍ನ ರೇಖಾಂಶವನ್ನೂ ಕ್ರಾಂತಿವೃತ್ತದ ಬಾಗುವನ್ನೂ ಅಯನಬಿಂದುಗಳ ಸ್ಥಾನಗಳನ್ನೂ ನಿಖರವಾಗಿ ನಿರ್ಧರಿಸಿ ಮುಂದೆ ನಿರಪೇಕ್ಷ ಘಂಟಾವೃತ್ತಾಂಶಗಳ ವೀಕ್ಷಣೆಗೆ ಕೌಶಲಯುಕ್ತ ವಿಧಾನವೊಂದನ್ನು ರೂಪಿಸಿದ. ಪ್ರತಿಯೊಂದು ಅಯನಬಿಂದುವಿನ ಸಮೀಪದಲ್ಲೂ ಸೂರ್ಯನಿಗೆ ಏಕರೂಪದ ಯಾಮ್ಯೋತ್ತರ ಉನ್ನತಿ (ಐಡೆಂಟಿಕಲ್ ಮೆರಿಡಿಯನ್ ಆಲ್ಪಿಟ್ಯೂಡ್) ಇದ್ದಾಗ, ಸೂರ್ಯ ಯಾಮ್ಯೋತ್ತರ ರೇಖೆ ಹಾಯುವುದಕ್ಕೂ ಮತ್ತೊಂದು ಪ್ರಕಾಶಮಾನ ನಕ್ಷತ್ರ ಆ ರೇಖೆ ಹಾಯುವುದಕ್ಕೂ ನಡುವೆ ಸಂದ ಅವಧಿಯನ್ನು ಲೆಕ್ಕ ಹಾಕಿದ. ಈ ಅವಧಿಯ ಅರ್ಧವನ್ನು ಬಳಸಿಕೊಂಡು ಅಯನಸಂಕ್ರಾಂತಿ ಬಿಂದುವನ್ನು ಗುರುತಿಸುವುದರಿಂದ ಆ ನಕ್ಷತ್ರದ ಘಂಟಾವೃತ್ತಾಂಶವನ್ನು ತಿಳಿಯುವುದು ಸಾಧ್ಯವಾಯಿತು.
(ಎಸ್.ಎನ್.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ